ದಾಲ್ಚಿನ್ನಿ -
ಲಾರೇಸೀ ಕುಟುಂಬಕ್ಕೆ ಸೇರಿದ ಒಂದು ಪ್ರಸಿದ್ಧ ಸಂಬಾರವೃಕ್ಷ. ಭಾರತ ಮತ್ತು ಮಲಯ ದೇಶಗಳ ಮೂಲನಿವಾಸಿ. ಭಾರತದ ಮಲೆನಾಡು ಪ್ರದೇಶಗಳಲ್ಲೂ ನೀಲಗಿರಿ, ಅಸ್ಸಾಂ, ಕೇರಳಗಳಲ್ಲೂ, ಶ್ರೀಲಂಕಾ ಹಾಗೂ ಮಲಯದಲ್ಲೂ ಕಾಣದೊರೆಯುತ್ತದೆ. ಸಿನಮೋಮಮ್ ಜಿûೀಲ್ಯಾನಿಕಮ್ ಇದರ ಶಾಸ್ತ್ರೀಯ ಹೆಸರು.

	ಇದು 20`-35` ಎತ್ತರಕ್ಕೆ ಬೆಳೆಯುವ ಮಧ್ಯಮಗಾತ್ರದ ಮರ. ಇದರ ಎಳೆ ಎಲೆ ಮತ್ತು ಕುಡಿಗಳು ಕೆಂಪು ಬಣ್ಣದವಾಗಿದ್ದು ಆಕರ್ಷಕವಾಗಿರುವುವು. ಎಲೆಗಳ ಉದ್ದ 4”-7” . ಬಲಿತ ಎಲೆಗಳು ಬಣ್ಣ ಹೊಳೆಯುವ ಹಸಿರು. ಎಲೆಗಳಿಗೆ ಸುವಾಸನೆಯಿದೆ. ಎಳೆಯ ಕಾಂಡ ಕಂದು ಬಣ್ಣಕ್ಕಿದ್ದು ಬಲಿಯುತ್ತ ಹೋದಂತೆ ಕೆಂಪು ಮಿಶ್ರಿತ ಕಪ್ಪು ಬಣ್ಣವನ್ನು ತಳೆಯುತ್ತದೆ. ದಾಲ್ಚಿನ್ನಿ ಹೂ ಬಿಡುವುದು ಜನವರಿ ತಿಂಗಳ ವೇಳೆಗೆ, ಮೇ-ಆಗಸ್ಟ್ ಅವಧಿಯಲ್ಲಿ ಹಣ್ಣುಗಳು ಪಕ್ವವಾಗುವುವು. ಫಲ ಬೇರೆ ಮಾದರಿಯದು. ಒಂದೊಂದರಲ್ಲೂ ಒಂದೇ ಬೀಜವುಂಟು. 
(ಎಂ.ಎಚ್.ಎಂ.)

	ದಾಲ್ಚಿನ್ನಿ ಒಂದು ಗಟ್ಟಿಮರ ಹಾಗೂ ಯಾವ ರೀತಿಯ ಮಣ್ಣಿನಲ್ಲಾದರೂ ಬೆಳೆಯಬಲ್ಲದು. ಇದು ಬೆಳೆಯುವ ಮಣ್ಣು ಹಾಗೂ ಇತರ ವಾತಾವರಣದ ಗುಣಗಳನ್ನು ಅವಲಂಬಿಸಿ ದಾಲ್ಚಿನ್ನಿಯ ತೊಗಟೆಯ ಗುಣ ವ್ಯತ್ಯಾಸವಾಗುವುದು. ಅತ್ಯುತ್ತಮ ದರ್ಜೆಯ ಶ್ರೀಲಂಕಾ ದಾಲ್ಚಿನ್ನಿಯ ತೊಗಟೆಯನ್ನು ಬಿಳಿ ಮರಳು ಮಣ್ಣಿನಲ್ಲಿ ಬೆಳೆಯುವ ಮರಗಳಿಂದ ತೆಗೆಯುತ್ತಾರೆ. ಹ್ಯೂಮಸ್ ಮಿಶ್ರಿತ ಮರಳು ಮಣ್ಣು ಮತ್ತು ಸುಮಾರು 1500` ಎತ್ತರದ ಪ್ರದೇಶ ದಾಲ್ಚಿನ್ನಿಯ ಬೇಸಾಯಕ್ಕೆ ಬಹಳ ಅನುಕೂಲವಾದ್ದು. ಇದು ಅತಿವೃಷ್ಟಿಯನ್ನು ತಡೆದುಕೊಳ್ಳಬಲ್ಲುದು. ದನಕರುಗಳು ಇದನ್ನು ಮೇಯುವುದಿಲ್ಲ. ಆದರೆ ಬೆಂಕಿಯಿಂದ ಅನಾಹುತಕ್ಕೊಳಗಾಗುವ ಸಾಧ್ಯತೆಯಿದೆ.

	ಈ ಮರವನ್ನು ಹೆಚ್ಚಾಗಿ ಬೀಜಗಳಿಂದ ಬೆಳೆಸುತ್ತಾರೆ. ಕಳಿತ ಹಣ್ಣುಗಳನ್ನು ಒಟ್ಟುಗೂಡಿಸಿ, ಬಿಸಿಲಿನಲ್ಲಿ ಹಾಕಿ ಅವುಗಳ ತಿರುಳು ಕಪ್ಪು ಬಣ್ಣಕ್ಕೆ ತಿರುಗಿ ಕೊಳೆಯುವವರೆಗೂ ಬಿಡುತ್ತಾರೆ. ಅನಂತರ ಬೀಜಗಳನ್ನು ಬೇರ್ಪಡಿಸಿ ತೊಳೆದು ಒಣಗಿಸುತ್ತಾರೆ. ಬೀಜಗಳನ್ನು ನರ್ಸರಿಗಳಲ್ಲಿ ಬೆಳೆಸಿ ಅನಂತರ ಕಿತ್ತು ಬೇರೆಡೆ ನೆಡುತ್ತಾರೆ. 4-5 ಬೀಜಗಳನ್ನು ಒಟ್ಟೊಟ್ಟಾಗಿ ಹೊಲಗಳಲ್ಲೇ ನೆರಳಿನಲ್ಲಿ ಬೆಳೆಸುವುದೂ ಉಂಟು. ನರ್ಸರಿಗಳಲ್ಲಿ ಬೀಜಗಳನ್ನು ಬಿತ್ತರೆ ಸಸಿಯಿಂದ ಸಸಿಗೆ ಸುಮಾರು 9” ಅಂತರವಿರುವಂತೆ ನೋಡಿಕೊಳ್ಳಲಾಗುತ್ತದೆ. 2-3 ವಾರಗಳಲ್ಲಿ ಬೀಜ ಮೊಳಕೆಯೊಡೆಯಲು ಪ್ರಾರಂಭಿಸುತ್ತದೆ. ಸುಮಾರು 3-4 ಅಥವಾ 12 ತಿಂಗಳ ವಯಸ್ಸಿನ ಸಸಿಗಳನ್ನು ತೆಗೆದು ಬೇರೆಡೆಯಲ್ಲಿ 6` ಅಂತರಕ್ಕೊಂದರಂತೆ ನೆಡುತ್ತಾರೆ. ಹೀಗೆ ನಾಟಿ ಮಾಡಲು ಅಕ್ಟೋಬರ್ ನವೆಂಬರ್ ತಿಂಗಳುಗಳು ಸರಿಯಾದ ಸಮಯ. ನೇರವಾಗಿ ಬೀಜವನ್ನು ಹೊಲಗಳಲ್ಲಿ ಬಿತ್ತುವುದಾದರೆ, ಬೀಜಗಳನ್ನು 8” ಅಂತರದಲ್ಲಿ ವೃತ್ತಾಕಾರದ ಗುಳಿಗಳಲ್ಲಿ ಗುಂಪಾಗಿ ಬಿತ್ತುತ್ತಾರೆ. ಒಂದು ಗುಳಿಯಿಂದ ಇನ್ನೊಂದಕ್ಕೆ ಸುಮಾರು 10`ಗಳ ಅಂತರವಿರುತ್ತದೆ. ದಾಲ್ಚಿನ್ನಿಯನ್ನು 3 ಎಲೆಗಳುಳ್ಳ ಎಳೆಯ ಕಾಂಡ ತುಂಡುಗಳ ಮೂಲಕ ಕಟಿಂಗ್ಸ್ ರೀತಿಯಲ್ಲಿ ಬೆಳೆಸುವುದೂ ಉಂಟು. ಹೊಲದಲ್ಲಿ ವರ್ಷದಲ್ಲಿ 3-4 ಸಲ ಕಳೆ ಕೀಳಲಾಗುತ್ತದೆ. ಹಸುವಿನ ಸಗಣಿ ಮತ್ತು ತೆಂಗಿನ ಪೂನಾಕ್ ಎಂಬುದನ್ನು ಗೊಬ್ಬರವಾಗಿ ಬಳಸುತ್ತಾರೆ.

	ಗಿಡ ನೆಟ್ಟ 2 ಆಥವಾ 3ನೆಯ ವರ್ಷದ ಅನಂತರ ಮರಗಳ ಕೆಲವೇ ರೆಂಬೆಗಳನ್ನು ಉಳಿಸಿ ಪೊದೆಯಾಕಾರಕ್ಕೆ ಕತ್ತರಿಸಲಾಗುತ್ತದೆ. ಹೀಗೆ ಉಳಿಸಿದ ರೆಂಬೆಗಳಲ್ಲಿ 5-6ನ್ನು ಸುಮಾರು ಎಇರಡು ವರ್ಷಗಳು ಬೆಳೆಯಲು ಬಿಡುತ್ತಾರೆ; ಅಥವಾ ತೊಗಟೆಯು ಕಾರ್ಕ್ ಪದರದಿಂದಾಗಿ ಕಂದುಬಣ್ಣಕ್ಕೆ ತಿರುಗುವವರೆಗೂ ಬಿಡುತ್ತಾರೆ. ಆಗ ಕಾಂಡಗಳು 6`-8` ಎತ್ತರ 4 ಹಾಗೂ 0.5``-2`` ಸುತ್ತಳತೆಯುಳ್ಳವಾಗಿ ದಕಟಾವು ಮಾಮಡಲು ಸಿದ್ಧವಾಗುತ್ತದೆ. ಕಟಾವು ಮಾಡುವುದು ಹೆಚ್ಚಾಗಿ ಮಳೆಗಾಲದಲ್ಲಿ. ಆಗ ತೊಗಟೆಯನ್ನು ಸುಲಭವಾಗಿ ಸುಲಿಯಬಹುದು. ಪ0ಕ್ಕದ ರೆಂಬೆಗಳಿಲ್ಲದ ಕಾಂಡಗಳನ್ನು ಹಾಗೂ ಎಲೆಯಿಂದ ಆವೃತವಾದ ತುದಿಯಗಳನ್ನು ಒಂದು ಒರಟಾದ ಮರದಿಂಮದ ಉಜ್ಜುವುದರಿಂದ ತೊಗಟೆಯು ಸಡಿಲಸೆಇಲವಾಗುತ್ತದೆ. ಹೀಗೆ ಪಡೆದ ತೊಗಟೆಯನ್ನು ತೆ4ಂಗಿನ ನಾರಿನಿಂದ ಕಂತೆಗಳಾಗಿ ಕಟ್ಟಿ 24 ಗಂಟೆಗಳ ಕಾಲ ಹಾಗೆಯೇ ಬಿಡುತ್ತಾರೆ. ಆಗ ತೊಗಟೆಯಲ್ಲಿ ಉಬ್ಬುಉಬ ಬುವಿಕೆ ಉಂಟಾಗಿ, ಹೊರಗಿನ ಪದರಗಳನ್ನು ಸೆಇಲಸಡಿಲಗೊಳಿಸುಸತ್ತದೆ. ಪ್ರತಿಯೊಂದು ಪಟ್ಟೆಯ ಹೊರಚರ್ಮ (ಪದರ)ಹಾಗೂ ಒಳಭಾಗವನ್ನು ಬಗ್ಗಿದ ಚಾಕುವಿನಿಂದ ಹೆರೆಯಲಾಗುತ್ತದೆ. ತೊಗಟೆ ಒಣಗಿದ ಹಾಹಗೆಲ್ಲ ಸಂಕುಚಿತವಾಗಿ, ಸುರುಳಿ ಸುರುಳಿಯಾಗಿ ಸುತ್ತಿಕೊಳ್ಳುತ್ತದೆ. ಸಣ್ಣದಾದವುಗಳನ್ನು ದೊಡ್ಡದರ ಒಳಗೆ ತುರುಕಿ, ಒಂದರ ತುದಿಯೊಂದಿಗೆ ಮತ್ತೊಂದನ್ನು ಸೇರಿಸಿ 36`` ಉದ್ದ ಸಂಯುಕ್ತ ಸುರುಳಿಯನ್ನು ತಯಾರಿಸಲಾಗುತ್ತದೆ./ ಅವು ಹಸಿಯಾಗಿ ಮೆತ್ತಗಾಗಿದ್ದಾಗ ಕೈಯಿಇಂದ ಸುತ್ತುತ್ತಾರೆ. ಅನಂತರ ಸುಮಾರು 3 ದಿನಗಳ ಕಾಲ ಚಾಪೆಗಳ ಮೇಮಲೆ ಹರಡಿ ನೆರಳಿನಲ್ಲಿ ಒಣಗಿಸಲಾಗುತ್ತದೆ. ಆ ಸಮಯದಲ್ಲಿ ಸುರುಳಿಗಳನ್ನು ಆಗಾಗ್ಗೆ ಸುತ್ತಿ ಮೃದುವಾಗಿ ಕೈಯಿಂದ ಒತ್ತಿ ಅದು ಮುರಿಯದಂತೆ ಹಾಗೂ ಊದಿಕೊಳ್ಳದಂತೆ ನೋಡಿಕೊಳ್ಳಲಾಗುತ್ತದೆ. ಅವು ಸಾಕಷ್ಟು ಒಣಗಿದ ಮೇಲೆ ಕಂತೆಗಳಾಗಿ ಕೂಡಿ, ವರ್ಗೀಕರಿಸಿ ಮಾರಾಟಕ್ಕೆ ಕಳುಹಿಸಲಾಗುವುದು. 

ಮರದ ಮಧ್ಯಭಾಗದ ರೆಂಬೆಗಳಿಂದ ಪಡೆಯುವ ತೊಗಟೆ ಮಿಕ್ಕ ರೆಂಬೆಗಳಿಂದ ಪಡೆಯುವ ತೊಗಟೆಗಿಂತಲೂ ಶ್ರೇಷ್ಠ ಮಟ್ಟದ್ದು. ಹಾಗೂ ರೆಂಬೆಯ ಮಧ್ಯಭಾಗದ ತೊಗಟೆ ರೆಂಬೆಯ ಕೆಳ ಅಥವಾ ಮೇಲುಭಾಗದ ತೊಗಟೆಗಿಂತಲೂ ಉತ್ತಮ ಬಗೆಯದು. ರೆಂಬೆಯ ತಳಭಾಗದ ತೊಗಟೆ ಮಾತ್ರ ಕೆಳದರ್ಜೆಯದು.

	ತೊಗಟೆಯ ಸುರುಳಿಗಳನ್ನು ಆಕಾರ ಹಾಗೂ ವಾಸನೆಯ ಆಧಾರದ ಮೇಲೆ 3-4 ವಿಧಗಳಾಗಿ ವಿಂಗಡಿಸುವುದುಂಟು. ಕೈಯಿಂದ ಬೇರ್ಪಡಿಸುವಾಗ ಸಣ್ಣ ತುಂಡುಗಳು ಹಾಗೂ ಅಳಿದುಳಿದ ಚೂರುಗಳು ಸಿಗುತ್ತವೆ. ಅವನ್ನು ಸುರುಳಿಗಳ ರೂಪದಲ್ಲಿ ಹಾಗೂ ಗರಿಗಳ ರೂಪದಲ್ಲಿ ಮಾರುತ್ತಾರೆ. ದೊಡ್ಡದಾದ ಹಾಗೂ ಒರಟಾದ ರೆಂಬೆಗಳ ತೊಗಟೆ ಸುರುಳಿಗಳಾಗುವುದಿಲ್ಲ. ಅದನ್ನು ದಪ್ಪ ತುಂಡುಗಳಾಗಿ ಕತ್ತರಿಸಿ ಸುಲಭವಾಗಿ ಚಕ್ಕೆಯಂತೆ ಸುಲಿಯಲಾಗುವ ಕಾಂಡಗಳ ಹಾಗೂ ಸವರಿದ ಭಾಗಗಳ ತೊಗಟೆಯೊಂದಿಗೆ ಸೇರಿಸುತ್ತಾರೆ. ಸುರುಳಿಗಳು, ಗರಿಗಳು ಹಾಗೂ ಚಕ್ಕೆಗಳನ್ನು ಉತ್ತಮ ದರ್ಜೆಯ ದಾಲ್ಚಿನ್ನಿ ಎಣ್ಣೆಯ ಉತ್ಪಾದನೆಗೆ ಬಳಸುತ್ತಾರೆ.

	ಎಲೆ ಹಾಗೂ ಎಲೆಯ ತೊಟ್ಟುಗಳಿಂದ ಬಟ್ಟಿಯಿಳಿಸಿ ಕಡಿಮೆ ದರ್ಜೆಯ ಎಣ್ಣೆಯನ್ನು ಪಡೆಯುವುದುಂಟು.
	ಗಿಡ ನೆಟ್ಟ 3-4 ವರ್ಷಗಳ ಅನಂತರ, ಒಂದು ಎಕರೆಯಿಂದ 50-60 ಪೌಂಡುಗಳಷ್ಟು ಸುರುಳಿಗಳನ್ನು ಮೊದಲನೆ ಬೆಳೆಯಿಂದ ನಿರೀಕ್ಷಿಸಬಹುದು. ಗಿಡಕ್ಕೆ ಸುಮಾರು 10 ವರ್ಷಗಳಾಗುವವರೆಗೂ ಉತ್ಪನ್ನ ಕ್ರಮೇಣ ಹೆಚ್ಚಾಗುತ್ತದೆ.

	ವಾಣಿಜ್ಯದ ದಾಲ್ಚಿನ್ನಿ ತೊಗಟೆ 0.5 ಸೆಂಟಿಮೀಟರ್‍ಗಿಂತ ಹೆಚ್ಚು ಮಂದವಾಗಿರುವುದಿಲ್ಲ. ಇದರ ಬಣ್ಣ ನಸುಕಂದು. ಒಳಭಾಗ ಹೊರಭಾಗಕ್ಕಿಂತ ದಟ್ಟ ಬಣ್ಣವುಳ್ಳದ್ದು ಹಾಗೂ ಇದರ ಮೇಲೆ ಉದ್ದುದ್ದವಾದ ಗೆರೆಗಳುಂಟು.

	ತೊಗಟೆ ಸಂಬಾರ ವಸ್ತುವಾಗಿ ಬಳಕೆಯಾಗುತ್ತದೆ. ಇದಕ್ಕೆ ಸುವಾಸನೆಯೂ ಒಗರು ರುಚಿಯೂ ಉಂಟು. ಇದು ಉತ್ತೇಜನಕಾರಿ ಮತ್ತು ಜೀರ್ಣಕಾರಿ. ಇದಕ್ಕೆ ವಾಕರಿಕೆ ಉಬ್ಬಳಿಕೆಗಳನ್ನು ತಡೆಗಟ್ಟುವ ಗುಣ ಉಂಟು. ಚಾಕಲೇಟ್ ತಯಾರಿಕೆಗಳಲ್ಲಿ ಪುಡಿ ದಾಲ್ಚಿನ್ನಿಯನ್ನು ಬಳಸುವುದಿದೆ. ಅಲ್ಲದೆ ಕಲ್ಲುಸಕ್ಕರೆ, ಅಂಟು, ಹಾಲಮಡ್ಡಿ ಹಾಗೂ ಸುಗಂಧ ದ್ರವ್ಯಗಳಿಗೆ ವಾಸನೆ ಕಟ್ಟಲೂ ಉಪಯೋಗಿಸುವುದುಂಟು.

	ದಾಲ್ಚಿನ್ನಿಯ ತೊಗಟೆಯಲ್ಲಿ 0.5%-1% ಎಣ್ಣೆ ಇದೆ. ದಾಲ್ಚಿನ್ನಿಯ ಸುರುಳಿಗಳನ್ನು ಒಟ್ಟುಮಾಡಿದ ಮೇಲೆ ಉಳಿಯುವ ಚೂರು, ಬೇಡದ ಅನೇಕ ಚಕ್ಕೆಗಳಿಂದ ಈ ಎಣ್ಣೆಯನ್ನು ಬಟ್ಟಿಯಿಳಿಸಿ ತೆಗೆಯಲಾಗುತ್ತದೆ. ಭಾರತದಲ್ಲಿ ಎಣ್ಣೆಯನ್ನು ತಯಾರಿಸುವುದು ಅತಿ ವಿರಳ. ಶ್ರೀಲಂಕಾದಿಂದ ಯೂರೋಪ್ ಹಾಗೂ ಅಮೆರಿಕಗಳಿಗೆ ತರಿಸಿಕೊಂಡು ಎಣ್ಣೆಯನ್ನು ತಯಾರಿಸುವುದುಂಟು. ಎಣ್ಣೆ ತೆಳು ಹಳದಿ ಬಣ್ಣದ್ದು. ಆದರೆ ಬಹಳ ಕಾಲ ಸಂಗ್ರಹಿಸಿಟ್ಟರೆ ಕೆಂಪು ಬಣ್ಣವನ್ನು ತಳೆಯುವುದು.

	ಶ್ರೀಲಂಕಾದ ದಾಲ್ಚಿನ್ನಿಯ ತೊಗಟೆಯನ್ನು ಮದ್ಯ, ಸೋಪು, ಮಿಠಾಯಿಗಳು ಇವುಗಳ ತಯಾರಿಕೆಯಲ್ಲಿ ಸುವಾಸನೆಗಾಗಿ ಬಳಸುತ್ತಾರೆ. ಇದು ಶಿಲೀಂಧ್ರ ನಾಶಕವೂ ಹೌದು.

	ದಾಲ್ಚಿನ್ನಿಯ ಎಲೆಗಳಲ್ಲಿ 1% ಎಣ್ಣೆ ಉಂಟು. ಎಣ್ಣೆಯನ್ನು ತೆಗೆಯಲು ಕಾರವಾದ ಇಲ್ಲವೆ ಕಹಿಯಾದ ಎಲೆಗಳನ್ನು ಆರಿಸಿ ಅವುಗಳನ್ನು ಮಣ್ಣಿನ ಪಾತ್ರೆಗಳಲ್ಲಿ ಅರ್ಧದಷ್ಟು ನೀರಿನ ಸಹಿತ ತುಂಬಿ ಬಟ್ಟಿಯಿಳಿಸಲಾಗುವುದು. ನೀರಿನ ಉಷ್ಣಾಂಶ ಅದರ ಕುದಿಬಿಂದುವಿಗಿಂತ ಹೆಚ್ಚಾಗದಂತೆ ನೋಡಿಕೊಳ್ಳಲಾಗುತ್ತದೆ. ಬಟ್ಟಿಯಿಳಿಸಲು ಸುಮಾರು 16 ಗಂಟೆಗಳ ಕಾಲ ಬೇಕು. ಎಣ್ಣೆಯನ್ನು ಘನೀಭವಿಸುವ ಪಾತ್ರೆಗಳಲ್ಲಿ ಸಂಗ್ರಹಿಸಲಾಗುತ್ತದೆ. ಅದು ನೀರಿಗಿಂತಲೂ ಹೆಚ್ಚು ಭಾರವಾದ್ದರಿಂದ, ಪಾತ್ರೆಯ ತಳದಲ್ಲಿ ಶೇಖರಗೊಳ್ಳುವುದು. ಎಲೆಯ ಎಣ್ಣೆ ಕಂದು ಬಣ್ಣದ್ದು ಹಾಗೂ ಕಾರವಾದ ಸ್ವಲ್ಪ ಕರ್ಪೂರದ ವಾಸನೆಯನ್ನು ಪಡೆದಿದ್ದು ಲವಂಗದ ಎಣ್ಣೆಯನ್ನು ಹೋಲುತ್ತದೆ. ಅಲ್ಲದೇ ಇದರಲ್ಲೂ ಲವಂಗದೆಣ್ಣೆಯಲ್ಲಿರುವಂತೆ ಯೂಜನಾಲ್ ಉಂಟು. ಬೇರಿನ ತೊಗಟೆಯಲ್ಲಿಯೂ 3% ಎಣ್ಣೆ ಉಂಟು. ಇದು ಬಣ್ಣವಿಲ್ಲದ ಆದರೆ ಕರ್ಪೂರದ ವಾಸನೆಯುಳ್ಳ ದ್ರವ. 
(ಕೆ.ಜಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ